यस्य निःश्वसितं वेदा यो वेदेभ्योऽखिलं जगत् ।
निर्ममे तमहं वन्दे विद्यातीर्थमहेश्वरम् ।।






5 ನೇ ವರ್ಷದ ಸಂಪೂರ್ಣ ಋಗ್ವೇದ ಕ್ರಮ ಪಾರಾಯಣ
12-7-2024 ಇಂದ 21-7-2024




ಶ್ರೀ ಆಶ್ವಲಾಯನ ವೃಂದ
ಮಾನವನು ತನ್ನ ಜೀವನದಲ್ಲಿ ಒಳಿತನ್ನು ಪಡೆಯಲು ದುಃಖಗಳನ್ನು ದೂರೀಕರಿಸಲು ಧರ್ಮಬದ್ಧವಾದ ಜೀವನವನ್ನೇ ನಡೆಸಬೇಕು. ಅಂತಹ ಧರ್ಮವನ್ನು ತಿಳಿಯಲು ವೇದಗಳಲ್ಲಿರುವ ವಿಷಯಗಳನ್ನು ತಿಳಿಯಬೇಕು. ವೇದಗಳನ್ನು ಧರ್ಮಶಾಸ್ತ್ರಗಳನ್ನು ಅಧ್ಯಯನ ಮಾಡಬೇಕು. ಅಂತಹ ವೇದಗಳನ್ನು ಅಧ್ಯಯನ-ಅಧ್ಯಾಪನ-ಪಾರಾಯಣ-ಪಾಠ-ಪ್ರವಚನಗಳ ಮೂಲಕ ಉಳಿಸಬೇಕೆಂಬ ಸದುದ್ದೇಶದಿಂದ, ಅಂತಹ ಮಂತ್ರಾನುಷ್ಠಾನಗಳ ಮೂಲಕ ಪ್ರತಿಯೊಂದು ಜೀವಿಯು ಸುಖವಾಗಿ ಜೀವಿಸಬೇಕೆಂಬುದಾಗಿ ಸಂಕಲ್ಪಿಸಿ ಶ್ರೀ ಆಶ್ವಲಾಯನ ವೃಂದ ವೆಂಬ ಸಂಸ್ಥೆಯನ್ನು ಸ್ಥಾಪಿಸಲಾಗಿದೆ
ಶ್ರೀ ಆಶ್ವಲಾಯನ ವೃಂದದ ಧ್ಯೇಯೋದ್ದೇಶಗಳು
ಗುರುಕುಲಗಳಿಗೆ ಧನಸಹಾಯ
ವೇದಾಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಧನಸಹಾಯ
ಪಾರಂಪರಿಕ ವಿದ್ಯೆಗಳಿಗೆ ಪ್ರೋತ್ಸಾಹ ಹಾಗು ವೇದವಿದ್ಯಾ ಪ್ರಚಾರ
ಷಡಂಗಗಳ ಅಧ್ಯಯನಕ್ಕೆ ವ್ಯವಸ್ಥೆ
ಸಂಸ್ಕೃತ ಸಾಹಿತ್ಯಗಳ ಪ್ರಚಾರ ಹಾಗೂ ಪ್ರೋತ್ಸಾಹ
ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹ
ಶ್ರೀ ಆಶ್ವಲಾಯನ ವೃಂದ ನಡೆದು ಬಂದ ದಾರಿ
"ವೇದೋನಿತ್ಯಮಧೀಯತಾಮ್" ಎಂಬ ಆಚಾರ್ಯರ ನುಡಿಯಂತೆ ಪ್ರತಿನಿತ್ಯ ವೇದಪಾರಾಯಣವನ್ನು ಮಾಡಬೇಕು. ತಿಂಗಳಿಗೊಮ್ಮೆಯಾದರೂ ಲೋಕಕಲ್ಯಾಣಾರ್ಥ ಸಾಮೂಹಿಕವಾಗಿ ವೇದಪಾರಾಯಣವನ್ನು ನಡೆಸಬೇಕೆಂಬ ಹೆಬ್ಬಯಕೆ ಯಿಂದ 11/08/2015 ರಂದು ವೇದಾಧ್ಯಾಯಿಗಳೆಲ್ಲರೂ ಸಂಕಲ್ಪಿಸಿ ಪ್ರತಿತಿಂಗಳಿಗೊಮ್ಮೆ ವೇದಾಭಿಮಾನಿಗಳ ಮನೆಗಳಲ್ಲಿ ವೇದಪಾರಾಯಣಗಳನ್ನು ನಡೆಸಿ ತನ್ಮೂಲಕ ವೇದಪ್ರಚಾರವನ್ನು ಮಾಡಲಾಗುತ್ತಿದೆ.
2017 ನೇ. ಇಸವಿಯಲ್ಲಿ ಅನಾವೃಷ್ಟಿಯನ್ನು ಗಮನದಲ್ಲಿರಿಸಿಕೊಂಡು 18/06/2017ರಂದು ಸಾಮೂಹಿಕ ಪರ್ಜನ್ಯಸೂಕ್ತ ಜಪವನ್ನು ನಡೆಸಲಾಯಿತು. ಸಮಾಜಕ್ಕೆ ವೇದಗಳ ಮಹತ್ವವನ್ನು ತಿಳಿಸುತ್ತಾ, ಉಪನಯನವಾದವರೆಲ್ಲರೂ ಕರ್ತವ್ಯನಿಷ್ಠೆಯಿಂದ ನಿತ್ಯಕರ್ಮಗಳನ್ನು ಮಾಡಲು ಪ್ರಚೋದನೆ ನೀಡಿ ಮಾರ್ಗದರ್ಶನ ಮಾಡಬೇಕೆಂದು 2017 ಹಾಗೂ 2018ನೇ ವರ್ಷಗಳಲ್ಲಿ "ವೇದ ಶಿಬಿರ”ಗಳನ್ನು ಆಯೋಜಿಸಿ 500 ಕ್ಕೂ ಹೆಚ್ಚಿನವರನ್ನು ನಿತ್ಯಕರ್ಮಗಳನ್ನು ಮಾಡಲು ಸಿದ್ಧಪಡಿಸಿರುತ್ತೇವೆ.
2018 ಹಾಗೂ 2019 ನೇ ವರ್ಷಗಳಲ್ಲಿ ವಿಶ್ವಶಾಂತಿಗಾಗಿ ಸಾಮೂಹಿಕ "ಐಕ್ಯಮತ್ಯಸೂಕ್ತ" ಜಪವನ್ನು ನಡೆಸಿ, ಹಲವು ಹಿರಿಯ ವಿದ್ವಾಂಸರನ್ನು ಗೌರವಿಸಿ ಸನ್ಮಾನಿಸಿರುತ್ತೇವೆ. ಅನಾರೋಗ್ಯದಿಂದ ಬಳಲುತ್ತಿದ್ದ ಹಲವು ಜನರಿಗೆ ಧನಸಹಾಯವನ್ನು ಮಾಡಿ, ಜನರು "ಕೊರೋನ'' ಎಂಬ ಮಹಾವ್ಯಾಧಿಗೆ ತತ್ತರಿಸಿ ಹೋಗಿರುವ ಸಮಯದಲ್ಲಿ ನೂರಾರು ಜನರಿಗೆ ದಿನಸಿಪದಾರ್ಥಗಳನ್ನು ವೃಂದದ ವತಿಯಿಂದ ನೀಡಿ ಸಾಮಾಜಿಕ ಸೇವೆಯನ್ನು ಮಾಡಲಾಗಿದೆ.
ತಾ।। 05/06/2020 ಅಧಿಕೃತವಾಗಿ "ಶ್ರೀ ಅಶ್ವಲಾಯನ ವೃಂದ" ವನ್ನು ನೋಂದಣಿ ಮಾಡಿ ತನ್ಮೂಲಕ 2020 ರಿಂದ ಪ್ರತಿವರ್ಷ ಆಷಾಢ ಮಾಸದಲ್ಲಿ ದೊಡ್ಡ ಪ್ರಮಾಣದಲ್ಲಿ ವೈದಿಕರನ್ನು, ವೇದಾಭಿಮಾನಿಗಳನ್ನೂ ಒಗ್ಗೂಡಿಸಿ “ಸಂಪೂರ್ಣ ಋಗ್ವೇದ ಕ್ರಮ ಪಾರಾಯಣ” ವನ್ನು ಆಯೋಜಿಸಲಾಗುತ್ತಿದೆ. ಹಲವು ಹಿರಿಯ ಹಾಗೂ ಯುವ ವಿದ್ವಾಂಸರಿಗೆ ''ಶ್ರೀಆಶ್ವಲಾಯನ ಪುರಸ್ಕಾರ" ವನ್ನು ನೀಡಿ ಸನ್ಮಾನಿಸಲಾಗುತ್ತಿದೆ.
ವೇದಪಾರಾಯಣ ಯಜ್ಞದ ಮೂಲಕ ಹಲವು ವೇದಾಭಿಮಾನಿಗಳ ಮನೆಗಳಲ್ಲಿ ವೇದಪಾರಾಯಣಗಳನ್ನು, ಸತ್ಸಂಗಗಳನ್ನು ಆಯೋಜಿಸ ಲಾಗುತ್ತಿದೆ. ಮದುವೆ, ಮುಂಜಿ, ಗೃಹಪ್ರವೇಶ ಮುಂತಾದ ಧಾರ್ಮಿಕ ಹಾಗು ಇತರೆ ವೈದಿಕ ಕಾರ್ಯಕ್ರಮಗಳಿಗೆ ಅಧ್ಯಯನ ಸಂಪನ್ನರಾದ, ಕರ್ಮನಿಷ್ಠರಾದ ಪುರೋಹಿತರ ವ್ಯವಸ್ಥೆಯನ್ನುಮಾಡಿಕೊಡಲಾಗುತ್ತಿದೆ.
ಈ ಎಲ್ಲಾ ಕಾರ್ಯಕ್ರಮಗಳನ್ನು ಮಾಡಲು ಸನಾತನ ಧರ್ಮೀಯ ರಾದ ತಮ್ಮೆಲ್ಲರ ತನು- ಮನ- ಧನ ಸಹಾಯಗಳ ಅವಶ್ಯಕತೆ ಇರುವುದರಿಂದ, ತಾವೆಲ್ಲರೂ ಶ್ರೀ ಆಶ್ವಲಾಯನ ವೃಂದ ದೊಂದಿಗೆ ಕೈಜೋಡಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.